ಯೆನೆಪೋಯಾದಲ್ಲಿ ಹರೇಕಳ ಹಾಜಬ್ಬ ಹಾಗೂ ಡಾ.ಹಬೀಬ್ ರಹಮಾನ್ ಗೆ ಅಭಿನಂದನೆ ಕಾರ್ಯಕ್ರಮ

ಕರಾವಳಿ ಮಂಗಳೂರು ರಾಜ್ಯ
Spread the love

ಅಬ್ಬಕ್ಕ ನ್ಯೂಸ್ (28.01.2020)ಕೊಣಾಜೆ: ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕತೆಯೊಂದಿಗೆ ನಿಸ್ವಾರ್ಥವಾಗಿ ಸಮಾಜಕ್ಕೆ ಕೊಡುಗೆ ನೀಡಿದರೆ ಒಂದಲ್ಲ ಒಂದು ದಿನ ಅವರನ್ನು ಇಡೀ ಸಮಾಜವೇ ಗುರುತಿಸುತ್ತದೆ. ಇದಕ್ಕೆ ಅಕ್ಷರ ಸಂತ ಹರೇಕಳ ಹಾಜಬ್ಬ ಹಾಗೂ ಹಬೀಬ್ ರೆಹಮಾನ್ ಅವರೇ ಸಾಕ್ಷಿ ಯಾಗಿದ್ದಾರೆ. ಇವರಿಬ್ಬರೂ ಸಲ್ಲಿಸಿದ ಸೇವೆ ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದು ಯೆನೆಪೋಯಾ ವಿವಿಯ ವೈ. ಅಬ್ದುಲ್ಲಾ ಕುಂಞ ಹೇಳಿದರು.
ಯೆನೆಪೋಯಾ ವಿವಿಯ ವೈ. ಅಬ್ದುಲ್ಲಾ ಕುಂಞ ಮಂಗಳೂರು ಯೆನೆಪೋಯಾ ಪರಿಗಣಿತ ವಿಶ್ವವಿದ್ಯಾನಿಲಯದ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಹರೇಕಳ ಹಾಜಬ್ಬ ಹಾಗೂ ಇನ್ ಸ್ಪೈರೇಶನಲ್ ಲೀಡರ್ ಶಿಪ್ ಪ್ರಶಸ್ತಿ ಪುರಸ್ಕೃತ ಡಾ.ಸಿ.ಪಿ. ಹಬೀಬ್ ರಹಮಾನ್ ಅವರ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಿತ್ತಲೆ ಮಾರುವುದರೊಂದಿಗೆ ತಮ್ಮ ಗ್ರಾಮದ ಮಕ್ಕಳು ಅಕ್ಷರವಂತರಾಗಬೇಕು ಎನ್ನುವ ಕನಸಿನೊಂದಿಗೆ ಶಾಲೆಯನ್ನು ಆರಂಭಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದು, ಇವರ ಸಮಾಜ ಸೇವೆಯನ್ನು ಸರ್ಕಾರ ಗುರುತಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ ಅವರು, ಈ ಬಡ ವ್ಯಕ್ತಿಯನ್ನು ಯೆನೆಪೋಯಾ ಸಂಸ್ಥೆ ಸನ್ಮಾನಿಸಿ ಗೌರವಿಸಿರುವುದಕ್ಕೆ ನಾನು ಚಿರರುಣಿಯಾಗಿದ್ದಾನೆ. 2009ರಲ್ಲೇ ಹರೇಕಳದ ಶಾಲೆಗೆ ಕಂಪ್ಯೂಟರ್ ಜೊತೆಗೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸಿದ ಮಹಾ ಕೊಡುಗೆಯನ್ನು ಯೆನೆಪೋಯಾ ಸಂಸ್ಥೆ ನೀಡಿ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದೆ. ಅಲ್ಲದೆ ಇಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಎಲ್ಲರೂ ಸಮಾಜಕ್ಕೆ ಬಡವರಿಗೆ ಕೊಡುಗೆ ನೀಡುವಂತಾಗಲಿ ಹಾಗೂ ಸಂಸ್ಥೆಗೆ ಇನ್ನಷ್ಟು ಕೀರ್ತಿ ಬರಲಿ ಎಂದರು.

ಗೌರವ ಸ್ವೀಕರಿಸಿ ಮಾತನಾಡಿದ ಇಸ್ಲಾಮಿಕ್ ಅಕಾಡೆಮಿಕ್ ಎಜ್ಯುಕೇಶನ್ ನ ಟ್ರಸ್ಟಿ ಡಾ.ಸಿ.ಪಿ.ಹಬೀಬ್ ರಹಮಾನ್ ಮಾತನಾಡಿ, ಭಾರತ ಸರಕಾರವು ಹರೇಕಳ ಹಾಜಬ್ಬ ರಂತಹ ಸಾಮಾನ್ಯ ವ್ಯಕ್ತಿಗೆ ಗುರುತಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಅರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾವು ಕೊಡುಗೆ ನೀಡುವಂತಾಗಬೇಕು. ಯೆನೆಪೋಯಾ ಸಂಸ್ಥೆಯು ವೈದ್ಯಕೀಯ ಸೇವೆಯೊಂದಿಗೆ ಹಲವಾರು ಸಮಾಜಮುಖಿ ಯೋಜನೆಯ ಮೂಲಕ ಗುರುತಿಸಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಯೆನೆಪೋಯಾ ವಿವಿ ಕುಲಪತಿ ಡಾ.ಎಂ.ವಿಜಯಕುಮಾರ್, ಯೆನೆಪೋಯಾ ಗ್ರೂಪ್ ಚೆಯರ್ ಮೆನ್ ವೈ. ಮಹಮ್ಮದ್ ಕುಂಞ, ಹಣಕಾಸು ಅಧಿಕಾರಿ ಮಹಮ್ಮದ್ ಬಾವು ಮೊದಲಾದವರು ಉಪಸ್ಥಿತರಿದ್ದರು.
ಕುಲಸಚಿವ ಗಂಗಾಧರ ಸೋಮಯಾಜಿ ಸ್ವಾಗತಿಸಿದರು. ಡಾ.ನಂದೀಶ್ ವಂದಿಸಿದರು. ಡಾ.ರೋಶನಿ, ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು