ಉಳ್ಳಾಲ ದರ್ಗ ಆಡಳಿತಾಧಿಕಾರಿ ರದ್ದುಪಡಿಸುವಂತೆ ಪ್ರತಿಭಟನೆ

ರಾಜ್ಯ
Spread the love

ಉಳ್ಳಾಲ(ಡಿ13/2019): ಉಳ್ಳಾಲ ಸಯ್ಯಿದ್ ಮದನಿ ದರ್ಗಾಕ್ಕೆ ಆಡಳಿತಾಧಿಕಾರಿ ನೇಮಕ ರದ್ದುಪಡಿಸುವಂತೆ ಒತ್ತಾಯಿಸಿ, ಜಮಾಅತ್ ಸಂರಕ್ಷಣಾ ಸಮಿತಿ
ನಗರ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ನಗರಸಭಾ ಪೌರಾಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಈ ಸಂದರ್ಭ ಮಾತನಾಡಿದ ಮುಖಂಡ ಫಾರೂಕ್ ಉಳ್ಳಾಲ್ ಮಾತನಾಡಿ, ಈಗಿನ ದರ್ಗಾ ಆಡಳಿತ ಸಮಿತಿ ಭ್ರಷ್ಟಾಚಾರ ನಡೆಸಿದ್ದರೆ ಕಾನೂನು ಪ್ರಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಅಧಿಕಾರ ವಕ್ಫ್ ಸಮಿತಿಗಿದೆ. ಬಾಕಿಯಿದೆ ಎನ್ನಲಾಗುವ
1.70ಕೋಟಿ ಸೆಸ್ ಹಣ ಸಮಾಜದಲ್ಲಿರುವ ಕಟ್ಟಕಡೇಯ ಜನರ ಸಂಕಷ್ಟಕ್ಕೆ ಸ್ಪಂದಿಸಲಾಗುತ್ತಿರುವ ಹಣವಾಗಿದೆ. ಇದು ಸಯ್ಯಿದ್ ಮದನಿ ತಂಙಳರ ಹೆಸರಲ್ಲಿ ಬಂದ ಹರಕೆಯ ಹಣವಾಗಿದೆ. ಇದನ್ನೇ ಸರ್ಕಾರಕ್ಕೆ ಕಟ್ಟುವಂತೆ ತಿಳಿಸಲಾಗಿದ್ದು ಇದಕ್ಕಾಗಿ ಎರಡು ಬಾರಿ ಸರ್ಕಾರದಿಂದ ವಜಾಗೊಂಡಿದ್ದ ಅಧಿಕಾರಿಯನ್ನು ನೇಮಿಸಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‌
ಎವರೆಸ್ಟ್ ಮುಸ್ತಫಾ ಮಾತನಾಡಿ, ಚುನಾಯಿತ ಪ್ರತಿನಿಧಿಗಳು ದರ್ಗಾದ ಆಡಳಿತ ನಡೆಸುವುದು ಕಳೆದ 400 ವರ್ಷಗಳಿಂದ ನಡೆದು ಬಂದಿದೆ. ಆದರೆ ಕಳೆದ ಮೂರುವರೆ ವರ್ಷಗಳಿಂದ ದರ್ಗಾ ಆಡಳಿತ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಆಡಳಿತಾಧಿಕಾರಿ ನೇಮಕ ಮಾಡಲಾಗಿದ್ದು ಸರ್ಕಾರ ಈ ವಿಚಾರದಲ್ಲಿ ಸೂಕ್ಷ್ಮತೆ ಪಾಲಿಸಬೇಕು. ಹಿಂದೆಲ್ಲಾ ಉಳ್ಳಾಲ ಕೋಮು‌ ಸೂಕ್ಷ್ಮ ಪ್ರದೇಶ ಎನ್ನುವ ಕುಖ್ಯಾತಿ ಹೊಂದಿತ್ತು, ಆದರೆ ಕಳೆದ ಮೂರುವರೆ ವರ್ಷಗಳಲ್ಲಿ ಸೌಹಾರ್ದತೆಗಾಗಿ ದರ್ಗಾ ಸಮಿತಿ ಶ್ರಮಿಸಿದೆ ಎಂದು ತಿಳಿಸಿದರು‌.
ಮುಖಂಡರಾದ ಯು.ಎನ್.ಇಬ್ರಾಹಿಂ, ನಗರಸಭಾ ಸದಸ್ಯರಾದ ಬಶೀರ್ ಮುಕಚ್ಚೇರಿ, ಅಬ್ದುಲ್ ಜಬ್ಬಾರ್, ಯು.ಕೆ.ಅಬ್ಬಾಸ್ ಕೋಟೆಪುರ,
ಅಹ್ಮದ್ ಕಬೀರ್ ಚಾಯಬ್ಬ,
ಮುಸ್ತಫಾ ಅಬ್ದುಲ್ಲಾ, ಹುಸೈನ್ ಕುಂಞಿಮೋನು, ಆಸಿಫ್ ಅಬ್ದುಲ್ಲಾ, ಅಲ್ತಾಫ್ ಹಳೆಕೋಟೆ, ಅಯೂಬ್ ಮಂಚಿಲ, ಹಮೀದ್ ಕೋಡಿ ಇನ್ನಿತರರು ಉಪಸ್ಥಿತರಿದ್ದರು.